ಭೀಮ ಹಿಡಿಂಬೆಯರ ಮಗ. ಕೆಂಗಣ್ಣು ಕೋರೆದಾಡೆಗಳ ಭಯಂಕರ ರೂಪದವ. ಭೀಮನಂತೆಯೇ ಮಹಾ ಬಲಶಾಲಿ. ಬಾಲ್ಯದಲ್ಲಿಯೇ ಯೌವನವನ್ನು ಪಡೆದು ಶಸ್ತ್ರಾಸ್ತ್ರ ನಿಪುಣನಾದ. ಅಸಾಧಾರಣ ಒರಟುತನ, ದರ್ಪ, ಅಹಂಕಾರ, ಔದ್ಧತ್ಯಗಳು ಬಾಹ್ಯ ವ್ಯಕ್ತಿತ್ವದಲ್ಲಿ ಕಂಡುಬಂದರೂ ಪ್ರೀತಿ, ದಯೆ, ಭಕ್ತಿ, ಧರ್ಮಪರತೆ, ಗುರುಜನ ವಿಧೇಯತೆ, ಕರ್ತವ್ಯನಿಷ್ಠೆ, ಮುಂತಾದ ಮಾನವೀಯ ಗುಣಗಳನ್ನುಳ್ಳವ.

ಅರ್ಜುನ ತನ್ನ ಪ್ರತಿಜ್ಞೆಯಂತೆ, ಜಯದ್ರಥನನ್ನು ಕೊಂದಮೇಲೆ ಕರ್ಣನನ್ನು ಎದುರಿಸಲು ಸನ್ನದ್ಧನಾದ ಸಂದರ್ಭದಲ್ಲಿ ಕೃಷ್ಣ ಅವನನ್ನು ತಡೆದು ಘಟೋತ್ಕಚನನ್ನು ಕರೆಸುತ್ತಾನೆ. ಕಾಳರುದ್ರನ ಪಡೆಯಂತಿದ್ದ ಘಟೋತ್ಕಚನ ಪರಿವಾರದವರ ಕರಾಳದೇಹ ಮತ್ತು ಕೋರೆದಾಡೆಗಳನ್ನು ನೋಡಿದರೆ ಕಾರಿರುಳ ಪಟ್ಟಣಕ್ಕೆ ಚಂದ್ರನ ತೋರಣವನ್ನು ಕಟ್ಟಿದಂತೆ ಕಾಣುತ್ತಿತ್ತೆಂದು ಕುಮಾರವ್ಯಾಸ ಬಣ್ಣಿಸಿದ್ದಾನೆ. ಸಿಡಿಲ ಸೆರೆ ಬಿಟ್ಟಂತೆ ಇವನೂ ಇವನ ಪರಿವಾರಕೋಟಿಯೂ ಯುದ್ಧದಲ್ಲಿ ತೊಡಗುತ್ತಾರೆ. ಅಪಾರವಾದ ಕುರುಸೈನ್ಯದ ದಮನಕ್ಕಾಗಿ ಬಿರುಗಾಳಿಯಾಗಿ, ಕಾಳ್ಗಿಚ್ಚಾಗಿ, ಫಣಿಯಾಗಿ, ಸಮುದ್ರವಾಗಿ ಗಿರಿಜಾಲವಾಗಿ ಸಿಡಿಲು ಮಿಂಚುಗಳಾಗಿ, ಹೊಗೆಯಾಗಿ, ಹುಲಿಯಾಗಿ, ಭೈರವನ ರೂಪವಾಗಿ ಘಟೋತ್ಕಚ ಮಾಯಾಯುದ್ಧದಲ್ಲಿ ತೊಡಗುತ್ತಾನೆ. ಇದರಿಂದಾಗಿ ಕುರುಸೈನ್ಯದಲ್ಲಿ ಹಾಹಾಕಾರ ಏಳುತ್ತದೆ. ಇವನ ಹೊಡೆತವನ್ನು ತಾಳಲಾರದೆ ದ್ರೋಣ, ಅಶ್ವತ್ಥಾಮ, ಶಲ್ಯ, ಕೃಪ ಮುಂತಾದವರೆಲ್ಲ ಪಲಾಯನಗೈಯುತ್ತಾರೆ. ಅನಂತರ ಕರ್ಣ ಬರುತ್ತಾನೆ. ಆಗ ತಲೆ ಮುಗಿಲಿಗೆ ತುಡುಕುವಂತೆ ಘಟೋತ್ಕಚನ ದೇಹಾಕೃತಿ ಬೆಳೆದು ಕೈಕಾಲ್ ಮೂಡಿತೋ ನಭಕೆ ಎಂಬ ಭ್ರಮೆಯನ್ನುಂಟು ಮಾಡುತ್ತದೆ. ಕರ್ಣ ಸೂರ್ಯನ ಮಹಿಮೆಗೆ ದೈತ್ಯರಾಹುಗ್ರಹಣವಾಗುತ್ತದೆ. ಇಬ್ಬರಿಗೂ ಯುದ್ಧ ಮೊದಲಾಗುತ್ತದೆ. ತನ್ನ ಕೈಮೀರುತ್ತಿದೆ ಎಂದೆನಿಸಿದಾಗ ಕರ್ಣ, ಇಂದ್ರನಿಂದ ಪಡೆದಿದ್ದ ವೈಜಯಂತಿ ಎಂಬ ಶಕ್ತಿಯನ್ನು ದೈತ್ಯನ ಮೇಲೆ ಪ್ರಯೋಗಿಸುತ್ತಾನೆ. ಬಿರಿದ ಗಿರಿಯಂತೆ ಘಟೋತ್ಕಚ ಅಂತರಿಕ್ಷದಿಂದ ನೆಲಕ್ಕೆ ಉರುಳುತ್ತಾನೆ. ಈತ ಬಿದ್ದ ರಭಸಕ್ಕೆ ಒಂದು ಅಕ್ಷೌೕಹಿಣೀ ಸೈನ್ಯ ಸಾವನ್ನಪ್ಪುತ್ತದೆ. ಕರ್ಣನಲ್ಲಿದ್ದ ಮೂರು ಅತ್ಯುತ್ತಮ ರಕ್ಷಣೆಗಳಲ್ಲಿ ಮೊದಲೇ ಉಪಾಯಾಂತರದಿಂದ ಕವಚವನ್ನೂ ಕರ್ಣಕುಂಡಲವನ್ನೂ ಕಳೆದುಕೊಳ್ಳುವಂತೆ ಮಾಡಿದ್ದ ಕೃಷ್ಣ ಅವನಲ್ಲಿದ್ದ ಇನ್ನೊಂದು ಪ್ರಬಲ ಶಕ್ತಿಯಾದ ವೈಜಯಂತಿಯನ್ನು ನಾಶ ಮಾಡಲು ಘಟೋತ್ಕಚನನ್ನು ಬಲಿಕೊಡುತ್ತಾನೆ. 

ರಾಜಸೂಯಯಾಗದ ಸಂದರ್ಭದಲ್ಲಿ ಲಂಕೆಗೆ ಹೋಗಿ ವಿಭೀಷಣನಿಂದ ಕಪ್ಪ ತಂದದ್ದು, ವನವಾಸದ ಸಂದರ್ಭದಲ್ಲಿ ಮೂರ್ಛೆಹೋದ ದ್ರೌಪದಿಯನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ನಾರಾಯಣಾಶ್ರಮ ಸೇರಿಸಿದ್ದು, ಅಭಿಮನ್ಯುವಿಗೆ ಮಾತಾಗಿ ಕುಟಿಲತೆಯಿಂದ ತಪ್ಪಿಹೋಗುತ್ತಿದ್ದ ಬಲರಾಮನ ಮಗಳಾದ ವತ್ಸಲೆಯನ್ನು ಅಭಿಮನ್ಯುವಿಗೇ ಮದುವೆ ಮಾಡಿಸಿದ್ದು, ಮಹಾಭಾರತದ ಯುದ್ಧದ ಸಂದರ್ಭದಲ್ಲಿ ತಾನೂ ತನ್ನ ಮಕ್ಕಳೂ ಪಾಂಡವರ ಪರವಾಗಿ ಹೋರಾಡಿದ್ದು, ಜಟಾಸುರನ ಮಗ ಅಲಂಬುಸನನ್ನೂ ಬಕಾಸುರನ ತಮ್ಮಂದಿರಾದ ಅಲಂಬಲ ಮತ್ತು ಅಲಾಯುಧರನ್ನೂ ಕೊಂದದ್ದು, ಕಾಮಕಟಂಕಟೆಯೆಂಬ ರಾಕ್ಷಸಿಯನ್ನು ಗೆದ್ದು, ಅವಳಲ್ಲಿ ಬರ್ಬರಿಕನೆಂಬ ಮಗನನ್ನು ಪಡೆದದ್ದು - ಇವು ಮಹಾಭಾರತದಲ್ಲಿ ಘಟೋತ್ಕಚನಿಂದಾದ ಮುಖ್ಯ ಕಾರ್ಯಕಲಾಪಗಳು.	(ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ